Tuesday, July 28, 2009

ಸಂಗಾತಿ (ಪತ್ತೇದಾರಿ ಕಥೆ)


ಸರೀ ರಾತ್ರಿಯ ಹೊತ್ತು ಓದುವ ದೀಪದ ಮುಂದೆ ಕೆಲಸದಲ್ಲಿ ತಲ್ಲೀನನಾಗಿದ್ದ ಶಿವಚಂದ್ರನಿಗೆ ವಿದ್ಯುತ್ ಕೈ ಕೊಡುತ್ತದೆಯೆನ್ನುವ ಅರಿವಿರಲಿಲ್ಲ. ತಟ್ಟನೆ ದೀಪ ಆರಿ ಹೋಗಿ ಕತ್ತಲು ಕವಿಯುತ್ತಲೇ ಕಿಟಕಿಯ ಹೊರಗೆ ದೃಷ್ಟಿ ಹೊರಳಿಸಿದ. ಸ್ವಲ್ಪ ಹೊತ್ತು ಮುಂಚೆ ಆಕಾಶದಲ್ಲಿ ಚಂದ್ರನ ಶುಭ್ರ ಬೆಳಕು ಹಾಲಿನಂತೆ ಚೆಲ್ಲಿದ್ದನ್ನು ಕಂಡಿದ್ದ. ಆದರೆ ಈಗ ಎಲ್ಲಿಂದಲೋ ಹಾರಿ ಬಂದ ಮೋಡಗಳು ಚಂದ್ರನನ್ನು ನುಂಗಿದ್ದೇ ಕತ್ತಲ ಕರಾಳ ಛಾಯೆ ಭಯದ ವಾತಾವರಣವನ್ನು ಸೃಷ್ಟಿಸಿತು. ನೋಡುತ್ತಿದ್ದಂತೆ ಸಣ್ಣ ಚುಕ್ಕಿಯೊಂದು ವಾಹನದ ಹೆಡ್ ಲೈಟಿನ ಬೆಳಕಿನಂತೆ ಅಗಲವಾಗುತ್ತಾ ಕಿಟಕಿಯತ್ತ ಹೊರಳುವುದು ಕಂಡಿತು. ಅದು ಬೆಳಕಲ್ಲ! ಗಾಳಿಗೆ ಸೀರೆಯ ಸೆರಗನ್ನು ಹಾರಲು ಬಿಟ್ಟು ತನ್ನತ್ತಲೇ ಬರುತ್ತಿರುವ ಒಂದು ಹೆಣ್ಣಿನ ಆಕೃತಿ!

ಶಿವಚಂದ್ರ ಮಿಂಚಿನ ವೇಗದಲ್ಲಿ ಕಿಟಿಕಿಯತ್ತ ಸರಿದು ಬಾಗಿಲು ಎಳೆಯುವಾಗ ಕೈಗಳನ್ನು ಗಟ್ಟಿಯಾಗಿ ಹಿಡಿಯಿತು ಹೆಣ್ಣು! ಕೈ ಹಿಂದಕ್ಕೆ ಎಳೆದುಕೊಂಡ ಶಿವಚಂದ್ರ ನೋವಿನಿಂದ ಮುಲುಗಿದ. ಕಿಟಕಿಯ ಸರಳು ಕೈಯ ಮೇಲೆ ಗೀರು ಗಾಯ ಮೂಡಿಸಿತು.
`ಸಂಗಾತಿ' ಬಂದಷ್ಟೇ ವೇಗವಾಗಿ ಮಾಯವಾದ ಹೆಣ್ಣಿನ ತುಟಿಗಳಲ್ಲಿ ಉದುರಿದ ಇಂಪಾದ ಪದ ಅದು.ಇದು ತನ್ನ ಭ್ರಮೆ? ಆಘಾತ ತಟ್ಟಿದಂತೆ ಕುಳಿತಿದ್ದ ಯುವಕನ ತಲೆಯಲ್ಲಿ ಎರಡು ದಿವಸಗಳ ಹಿಂದೆ ಭೇಟಿಯಾದ ಹೆಂಗಸಿನ ನೆನಪು ಸುಳಿಯಿತು.
***
ಕೆದರಿದ ಕೂದಲು, ಮಾಸಲು ಸೀರೆ, ಹಣೆಯಲ್ಲಿ ರೂಪಾಯಿಯ ಪಾವಲಿಯಷ್ಟು ದೊಡ್ಡದಾದ ಕುಂಕುಮ ಬೆವರಿನಲ್ಲಿ ತೋಯ್ದು ಮುಖದ ಮೇಲೆ ವಿಚಿತ್ರವಾಗಿ ಕಾಣುತ್ತಿತ್ತು. ಆ ಮುಖದಲ್ಲಿಯೂ ಒಂದು ಭೀತಿಯ ಎಳೆಯನ್ನು ಗುರುತಿಸಿದ ಶಿವಚಂದ್ರ. ಹೆಂಗಸನ್ನು ಮೊದಲು ಸಮಾಧಾನಿಸುವುದು ಅಗತ್ಯವೆನಿಸಿತು.
"ಸುಧಾರಿಸಿಕೊಳ್ಳಿ"
ಹೆಂಗಸಿನ ತೆರೆದ ತುಟಿಗಳು ಮುಚ್ಚಿಕೊಂಡು ಉಗುಳು ಗಂಟಲಿನಿಂದ ಇಳಿಯಿತು. ಅವಕಾಶವಿಲ್ಲದಂತೆ ಕೈಯಲ್ಲಿದ್ದ ಚರ್ಮದ ಚೀಲಕ್ಕೆ ಕೈ ತೂರಿಸಿ ಒಂದು ಬಣ್ಣದ ಲಕೋಟೆಯನ್ನು ಎಳೆಯಿತು. ಶಿವಚಂದ್ರನ ನೋಟ ಹೆಂಗಸನ್ನು ಗಮನಿಸುತ್ತಲೇ ಇತ್ತು. ಲಕೋಟೆಯ ಮೇಲೆ ಬರೆದ ಶಾಯಿ ಪೆನ್ನಿನ ಮಾಸಲು ಅಕ್ಷರ ಸ್ಪಷ್ಟವಾಗಿ ಗೋಚರಿಸಿತು. `ಕಾವೇರಮ್ಮ, ಕೊಂಡಪಲ್ಲಿ'.
ಹೆಂಗಸಿನ ಹೆಸರು ಕಾವೇರಮ್ಮ. ಕೊಂಡಪಲ್ಲಿಯಿಂದ ಇಷ್ಟು ದೂರಕ್ಕೆ ತನ್ನನ್ನು ಕಾಣಲು ಬಂದಿರುವುದು! ಕಣ್ಣು ಸೂಕ್ಷ್ಮವಾಗಿ ಎದುರಿಗೆ ಕುಳಿತಿದ್ದವಳನ್ನು ಅಳೆಯಿತು. ಇಪ್ಪತ್ತು ವರ್ಷಗಳ ಹಿಂದೆ ಜಾತ್ರೆಯಲ್ಲಿ ಅಮ್ಮನ ಕೈಯಿಂದ ತಪ್ಪಿ ಹೋದ ಅಕ್ಕ, ವರದಾ ಇವಳೇನಾ? ಮನಸ್ಸು ಹದ್ದು ಮೀರಿ ಕುಣಿಯಿತು.
ಹೆಂಗಸು ಲಕೋಟೆಯನ್ನು ಬಿಚ್ಚಿ, ಎರಡು ಬಣ್ಣದ ಫೋಟೋಗಳನ್ನು ಮೇಜಿನ ಮೇಲೆ ಇರಿಸಿತು. ಒಂದು ಮೂವತ್ತರ ಅಂಚಿನ ಸುಂದರ ತರುಣ! ಸಿನಿಮಾದ ನಾಯಕನಿಗಿಂತ ಕಡಿಮೆಯಿಲ್ಲ. ಇದು ಅವಳ ಪ್ರಿಯತಮ! ಇನ್ನೊಂದು ಮೂರು ವರ್ಷದ ಹೆಣ್ಣು ಮಗುವಿನ ಭಾವಚಿತ್ರ! ಬಕೆಟ್‍ನಲ್ಲಿದ್ದ ನೀರಿಗೆ ಕೈ ಹಾಕಿ ಸಂಭ್ರಮಿಸುತ್ತಿರುವುದು ಈಕೆಯ ಮಗು!
ತನಗಿಂತಲೂ ವಯಸ್ಸಿನಲ್ಲಿ ಕಿರಿಯವನಾದ ಪ್ರಿಯತಮ ಮಗುವಿನ ಜೊತೆಗೆ ಕಾಣೆಯಾಗಿದ್ದಾನೆ! ಅವನನ್ನು ಹುಡುಕಿಸಿಕೊಡಲು ಇಲ್ಲಿಯವರೆಗೂ ಬಂದಿದೆ ಹೆಂಗಸು. ಇಲ್ಲ, ಇದು ತನ್ನ ವೃತ್ತಿಯಲ್ಲ. ಕುಂಚಗಳ ಜೊತೆಗೆ ಆಟವಾಡುವ ತನಗೆ ಈ ಪತ್ತೇದಾರಿಕೆ ಕೆಲಸ ಅನಗತ್ಯ.
ಕಾವೇರಮ್ಮನ ಕಣ್ಣುಗಳು ಹನಿಗೂಡಿದವು. ಮಾತು ಮೆಲ್ಲನೆ ಹೊರಳಿತು."ನಿನ್ನಿಂದ ಉಪಕಾರವಾಗ್ಬೇಕು" ಮಾತು ನಿಂತಿತು. ವರದಾ ತನ್ನನ್ನು ಗುರುತಿಸಿದ್ದಾಳೆ. ಅವಳ ಸಹಾಯಕ್ಕೆ ತಾನು ನಿಲ್ಲಬೇಕು."ನೀನು ವರದಾ...?"ಪ್ರಶ್ನೆ ಹೆಂಗಸಿನ ಮುಖದಲ್ಲಿ ಗೊಂದಲ ಮೂಡಿಸಿತು."ಅಲ್ಲ, ನಾನು ಕಾವೇರಮ್ಮಾ ಅಂತ. ಇಲ್ಲೇ ಪಕ್ಕದ ಬಡಾವಣೆಗೆ ಬಂದು ಒಂದು ವಾರವಾಯ್ತು. ಯಾರೋ ನಿಮ್ಮ ಪರಿಚಯ ಹೇಳಿದ್ರು. ಅದಕ್ಕೆ ಬಂದೆ"ಕಲಾವಿದನ ಮುಖದಲ್ಲಿ ನಿರಾಶೆ ಸುಳಿಯಿತು."ಏನಾಗ್ಬೇಕು ಹೇಳಿ?"
ಹೆಂಗಸು ಎರಡು ಫೋಟೋಗಳ ಕಥೆಯನ್ನು ಬಿಚ್ಚಿಟ್ಟಿತು. ಹೆಂಗಸಿಗೆ ಹುಚ್ಚು ಅಂದುಕೊಂಡ ಶಿವಚಂದ್ರ. ಆದರೂ ಅವನಿಗೆ ಸಂಶಯವೆ. ಕಾವೇರಮ್ಮ ಕಳೆದು ಹೋದ ತನ್ನ ಅಕ್ಕ ವರದಾನೆ. ಸತ್ಯಾನ್ವೇಷಣೆಗೆ ತೊಡಗಬೇಕಿತ್ತು. ಅದಕ್ಕಾಗಿ ರಾತ್ರಿಯಿಡೀ ಕುಳಿತು ಕೆಲಸ ಪೂರೈಸಿ ಕಾವೇರಮ್ಮನ ಮನೆಗೆ ಹೋಗಬೇಕು. ಸತ್ಯವನ್ನು ಕಂಡು ಹಿಡಿಯಬೇಕು. ಕೊಂಡಪಲ್ಲಿಯಿಂದ ಇಲ್ಲಿಗೆ ಬಂದು ತನ್ನನ್ನೇ ಹುಡುಕಿಕೊಂಡು ಬರುವ ಪ್ರಮೇಯವೇನು? ಮನಸ್ಸು ಹೊಯ್ದಾಡಿತು."ಸರಿ, ನಿಮ್ಮ ಕೆಲಸ ಸಾಧ್ಯವಾದಷ್ಟು ಬೇಗನೆ ಮುಗಿಸುತ್ತೇನೆ" ಭರವಸೆಯನ್ನಿತ್ತ ಕಲಾವಿದ. ಹೆಂಗಸು ಎದ್ದು ಕೈ ಮುಗಿದು ಹೊರಗೆ ನಡೆಯಿತು.
***
ಶಿವಚಂದ್ರನಿಗೆ ಕೆಲಸ ಮುಂದುವರೆಯದೆ ತಡೆಯಾಗಿತ್ತು. ತಾನು ಕಲ್ಪಿಸಿದ ಹೆಣ್ಣಿನ ಮುಖ ಕಾಗದದ ಮೇಲೆ ಸುಂದರವಾಗಿ ಮೂಡಿ ಬಂದಿತ್ತಾದರೂ ಭ್ರಮೆಯೊಳಗೆ ದೂಡುವ ಒಂದು ಹೆಣ್ಣಿನ ರೂಪ ಕತ್ತಲಲ್ಲಿ ಗೋಚರಿಸಿ ತಳಮಳಗೊಳಿಸುತ್ತಿತ್ತು. ತಾನು ರಚಿಸಿದ ಹುಡುಗಿಯೇ ಅವಳು? ಕಾವೇರಮ್ಮನನ್ನು ಕಾಣದೆ ಸಾಧ್ಯವಿಲ್ಲವೆಂದುಕೊಂಡ ಬಳಿಕ ಅವಳಿರುವ ಬಡಾವಣೆಗೆ ಹೋಗಿ ಬರುವುದೆಂದು ನಿರ್ಧರಿಸಿದ.
ಅಟೋರಿಕ್ಷಾ ಇಳಿದು ರಾಜರಾಜೇಶ್ವರಿ ಬಡಾವಣೆಯ ಅಪಾರ್ಟ್ ಮೆಂಟಿಗೆ ಬರುವಾಗ ಅರ್ಧ ಗಂಟೆ ಮೀರಿತ್ತು. ವಾರದ ಕೆಳಗೆ ಹೊಸದಾಗಿ ಬಂದಿರುವ ಕಾವೇರಮ್ಮನ ಪರಿಚಯ ಯಾರಿಗಿದೆ? ಯಾರನ್ನು ಕೇಳಬೇಕೆನ್ನುವ ಗೊಂದಲವಿತ್ತು. ಅಲ್ಲೇ ಹತ್ತಿರದಲ್ಲಿದ್ದ ಗಂಡಸನ್ನು ಕೇಳಿದ.
"ಇಲ್ಲಿಗೆ ಹೊಸದಾಗಿ ಬಂದಿರೋ ಕಾವೇರಮ್ಮನ ಮನೆ ಎಲ್ಲಿ?"ಎದುರಿಗೆ ನಿಂತಿದ್ದ ವ್ಯಕ್ತಿ ಮಿಂಚು ಹೊಡೆದಂತೆ ಕ್ಷಣ ಕಾಲ ತಟಸ್ಥನಾದ. ತಕ್ಷಣ ಮಾತು ಹೊರಳದೆ ತಳಮಳಿಸಿದ. ಶಿವಚಂದ್ರನಿಗೆ ವಿಚಿತ್ರವೆನಿಸಿತು. ಐವತ್ತರ ಹರೆಯದ ವ್ಯಕ್ತಿ ತೊದಲಿದ."ಕಾವೇರಮ್ಮ ನಿಮಗೆ ಹೇಗೆ ಗೊತ್ತು?"
ಸಂಬಂಧ ಪಡದ ವ್ಯಕ್ತಿ ಜೊತೆಗೆ ಎಲ್ಲವನ್ನೂ ಹೇಳಿಕೊಳ್ಳುವುದು ಸರಿಯಲ್ಲವೆನಿಸಿತು. ಆದರೆ ಎದುರಿಗೆ ನಿಂತಿರುವ ವ್ಯಕ್ತಿಗೆ ಏನಾದರೂ ಹೇಳಲೇ ಬೇಕಿತ್ತು. ಹೇಳಿದ.
"ಎರಡು ದಿವಸಗಳ ಹಿಂದೆ ಅವರು ಫೋಟೊಗಳನ್ನು ಬರೆಸಿಕೊಳ್ಳುವುದಕ್ಕೆ ನನ್ನಲ್ಲಿಗೆ ಬಂದಿದ್ರು""ನೀವು?" ಎದುರಿನ ವ್ಯಕ್ತಿ ಪ್ರಶ್ನೆ ಹಾಕಿ ತಬ್ಬಿಬ್ಬುಗೊಳಿಸಿದ ಅವನನ್ನು. ಕಲಾವಿದನಿಗೆ ಎಲ್ಲವನ್ನೂ ಹೇಳದೆ ವಿಧಿಯಿರಲಿಲ್ಲ.
"ನಾನೊಬ್ಬ ಆರ್ಟಿಸ್ಟ್. ಶಿವಚಂದ್ರಾಂತ ನನ್ನ ಹೆಸರು. ಎರಡು ದಿನಗಳ ಹಿಂದೆ ಕಾವೇರಮ್ಮ ಎರಡು ಫೋಟೊಗಳನ್ನು ತಂದು ಅದನ್ನು ಬರೆದುಕೊಡುವಂತೆ ಹೇಳಿದ್ರು. ಆದರೆ..." ಅವನ ಮಾತು ಮುಂದುವರಿಯುವ ಮೊದಲೇ ಎದುರಿಗೆ ನಿಂತಿದ್ದ ವ್ಯಕ್ತಿ ಬಿಕ್ಕಳಿಸಿ ನುಡಿದ.
"ಆದ್ರೆ... ಬೆಳಗಿನಿಂದ ಕಾವೇರಮ್ಮಾನೇ ಕಾಣಿಸ್ತಿಲ್ಲ. ಆ ಫೋಟೋಗಳ ಬಗ್ಗೆ ವಿಪರೀತ ತಲೆಕೆಡಿಸಿಕೊಂಡಿದ್ಲು. ಸತ್ತವರು ಮತ್ತೆ ಬರ್‍ತಾರ್‍ಆ ಶಿವಚಂದ್ರ?"ಹೆಗಲಿಗೆ ಸೇರಿಸಿದ ವಸ್ತ್ರದಿಂದ ಮೂಗಿನ ತುದಿಯನ್ನು ಒರೆಸಿಕೊಂಡ ವ್ಯಕ್ತಿ ಕಣ್ಣನ್ನೂ ಒತ್ತಿಕೊಂಡಿತು.
"ಅಂದ್ರೆ... ಅಂದ್ರೆ... ನೀವು... ಅವರಿಗೇನಾಗಬೇಕು?"
"ನಾನು ಅವಳ ಗಂಡ. ಪೊನ್ನಪ್ಪಾಂತ ನನ್ನ ಹೆಸರು. ಪೊಲೀಸರಿಗೆ ದೂರು ಕೊಡೋಣಾಂತ ಹೊರಟೆ. ಆದ್ರೆ ನೀವು ಬಂದ್ರಿ. ಕಾವೇರಿ ನಿಮ್ಮಲ್ಲಿ ಮತ್ತೇನಾದರೂ ವಿಷಯ ತಿಳಿಸಿದ್ಲೆ?" ಆಶಾ ಭಾವನೆಯೊಂದು ನೊಂದವನ ಮುಖದಿಂದ ಹೊರ ಹೊಮ್ಮಿತು. ಶಿವಚಂದ್ರ ಸ್ವಲ್ಪ ಹೊತ್ತು ಸುಮ್ಮನಿದ್ದು ರಾತ್ರಿಯ ಘಟನೆಯನ್ನು ನೆನಪಿಸಿಕೊಂಡು ಬಲಗೈಯ ಗೀರು ಗಾಯದತ್ತ ನೋಡಿದ. ಗಾಯವಿನ್ನೂ ಹಸಿಯಾಗಿಯೇ ಇತ್ತು.
"ಸತ್ತವರು ಮತ್ತೆ ಹುಟ್ಟಿ ಬರೋದು ಗೊತ್ತಿಲ್ಲ ಪೊನ್ನಪ್ಪ. ಆದ್ರೆ ಆಗಾಗ ಕಾಣಿಸಿಕೊಳ್ತಾರೇಂತ ಕೇಳಿದ್ದೀನಿ. ನಿನ್ನೆ ರಾತ್ರಿನೂ ಹಾಗೆ ಆಯ್ತು" ಮಾತು ನಿಲ್ಲಿಸಿದ.
ಪೊನ್ನಪ್ಪನ ಮುಖದಲ್ಲಿ ಬೆವರೊಡೆಯಿತು. ಮತ್ತೆ ಹೆಗಲಿನ ವಸ್ತ್ರವನ್ನು ಮುಖದ ಮೇಲಾಡಿಸಿ ಶಿವಚಂದ್ರನನ್ನು ಕರೆದುಕೊಂಡು ತನ್ನ ಮನೆಗೆ ಬಂದ.
"ಕಾಣೆಯಾಗೊ ಮುಂಚಿನ ರಾತ್ರಿ ಅವಳೂ ಇದೇ ಮಾತು ಹೇಳಿದ್ಲು. ಶಿವಚಂದ್ರ, ದಯವಿಟ್ಟು ನಿನ್ನೆ ರಾತ್ರಿ ನೀವೇನು ನೋಡಿದ್ರಿ ಹೇಳಿ?" ಅವನ ಕೈಯನ್ನು ಹಿಡಿದುಕೊಂಡು ಒತ್ತಾಯಿಸಿದ ಪೊನ್ನಪ್ಪ. ಶಿವಚಂದ್ರ ಕೈ ಬಿಡಿಸಿಕೊಂಡು ಕೈಯಲ್ಲಾದ ಗೀರು ಗಾಯವನ್ನು ತೋರಿಸಿ ರಾತ್ರಿ ಕಂಡ ಹುಡುಗಿಯನ್ನು ವಿವರಿಸಿದ."ಅಂದ್ರೆ, ನೀವು ರಚಿಸಿರೋ ಹುಡುಗಿನೇ ಜೀವಂತವಾಗಿ ಬಂದಿದ್ಲಾ, ಶಿವಚಂದ್ರ?"ಕಲಾವಿದ ತಲೆಯನ್ನು ಅಡ್ಡಡ್ಡಲಾಗಿ ಆಡಿಸಿದ. ನಿಧಾನವಾಗಿ ಪದಗಳನ್ನು ಹೊರಳಿಸಿದ.
"ಜೀವಂತವಾಗಿ ನೋಡಿದ್ದಲ್ಲ. ಕಂಡ ಬೆಳಕಿನಲ್ಲಿ ಗೋಚರಿಸಿದ ಹೆಣ್ಣು ನನ್ನ ಭ್ರಮೆ ಅಂದುಕೊಂಡೆ. ಆದರೆ ನೀವು ಹೇಳುತ್ತಿರುವುದು ನೋಡಿದ್ರೆ ನನಗೂನು ಸಂಶಯ. ಕಾವೇರಮ್ಮ ಹೇಳಿರೋ ಹಾಗೆ ಇದೆಂತ ಸಂಪ್ರದಾಯ?"ಹತಾಶೆಯ ಮುಖ ಹೊತ್ತಿದ್ದ ಪೊನ್ನಪ್ಪ ನಿಟ್ಟುಸಿರಿಟ್ಟು ತಲೆ ತಗ್ಗಿಸಿ ಕುಳಿತ. ಸಂಪ್ರದಾಯವೊಂದು ಈ ರೀತಿಯಾಗಿ ಶಿಕ್ಷಿಸುತ್ತದೆಯೆಂದು ತಿಳಿದಿರಲಿಲ್ಲ.
"ಶಿವಚಂದ್ರ, ನಾನು ಹಳ್ಳಿಯಿಂದ ಬಂದೋನು. ನಮ್ಮದು ಸಂಸ್ಕೃತಿ, ಸಂಪ್ರದಾಯಗಳ ನೆಲೆವೀಡೂಂತ ನಿಮಗೆ ತಿಳಿದಿದೆ. ನಮ್ಮಲ್ಲಿ ಇದು ಒಂದು ಸಂಪ್ರದಾಯ. ಅಪ್ರಾಪ್ತ ವಯಸ್ಸಿಗೆ ಸತ್ತವರು, ಬದುಕಿರುವ ಹತ್ತಿರದ ಬಂಧುಗಳಿಗೆ ಅದರಲ್ಲೂ ಮದುವೆಯಾಗದವರಿಗೆ ಉಪಟಳ ನೀಡುತ್ತಾರಂತೆ. ಅದಕ್ಕಾಗಿ ನಮ್ಮಲ್ಲೇ ಸತ್ತ ಹುಡುಗ ಮತ್ತು ಹುಡುಗಿಗೆ ನಾವು ಮದುವೆ ಮಾಡುವ ಸಂಪ್ರದಾಯವಿದೆ. ಕಾವೇರಿ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಮೆಚ್ಚಿಕೊಂಡವಳು. ಅವಳಿಗೆ ಮೊದಲನೆಯ ಆಘಾತ ತಟ್ಟಿದ್ದು, ಅವಳ ತಂಗಿ ಪೂರ್ಣ ಸತ್ತಾಗ. ಆ ಸಾವು ಸಂಭವಿಸಿದ್ದು ಮೂರು ವರ್ಷದ ನಮ್ಮ ಸತ್ತ ಮಗುವಿನಿಂದ ಅನ್ನೋದು ಅವಳ ಬಲವಾದ ನಂಬಿಕೆ. ಅದಕ್ಕಾಗಿ ನಾವು ಇಪ್ಪತ್ತು ವರ್ಷಗಳ ಹಿಂದೆ ಸತ್ತ ನಮ್ಮ ಮಗು ಪ್ರಿಯಾಗೆ ನಮ್ಮ ಕಾವೇರಿಯ ಚಿಕ್ಕಪ್ಪನ ಮಗ ವಿಕ್ರಾಂತ ಅಂದ್ರೆ... ಎರಡು ತಿಂಗಳ ಹಿಂದೆ ಕಾರು ಅಪಘಾತದಲ್ಲಿ ಸತ್ತವನಿಗೆ ಮದುವೆ ಮಾಡುವುದಾಗಿ ನಿರ್ಧರಿಸಿದ್ದೇವೆ. ಅದನ್ನೇ ಅವಳು ಮನಸ್ಸಿಗೆ ಹಚ್ಚಿಕೊಂಡಿದ್ಲು. ಆ ಮೂರು ವರ್ಷದ ಹುಡುಗಿಯ ಭಾವಚಿತ್ರವೇ ನಮ್ಮ ಮಗಳು ಪ್ರಿಯಾಂದು. ಆ ಮೂವತ್ತರ ಹುಡುಗನೇ ವಿಕ್ರಾಂತ" ಕಥೆ ಹೇಳಿ ನಿಲ್ಲಿಸಿದ ಪೊನ್ನಪ್ಪನ ಮುಖದಲ್ಲಿ ಇನ್ನೂ ಭೀತಿ ಮಾಯವಾಗಿರಲಿಲ್ಲ. ಕಲಾವಿದ ಶಿವಚಂದ್ರನಿಗೂ ಎಲ್ಲಾ ವಿಚಿತ್ರವಾಗಿ ಕಂಡಿತು.
***
ಶಿವಚಂದ್ರ ತಾನು ಹಿಡಿದ ಕೆಲಸಕ್ಕೊಂದು ಅಂತಿಮ ರೂಪ ಕೊಟ್ಟ. ಮೂರು ವರ್ಷದ ಹೆಣ್ಣು ಮಗುವಿನ ಚಿತ್ರವನ್ನು ಆಧರಿಸಿ ಇಪ್ಪತ್ತು, ಇಪ್ಪತ್ತೊಂದು ಹರೆಯದ ಹುಡುಗಿಯ ಚಿತ್ರವನ್ನು ಬಿಡಿಸುವುದು ಅವನ ವೃತ್ತಿಗೊಂದು ಸವಾಲಾಗಿತ್ತು. ಒಂದೇ ಚೌಕಟ್ಟಿನಲ್ಲಿ ಇಬ್ಬರ ಚಿತ್ರವನ್ನು ರಚಿಸಿ ನೆಮ್ಮದಿಯ ನಿಟ್ಟುಸಿರಿಟ್ಟ ಕಲಾವಿದನನ್ನು ಎಚ್ಚರಿಸುವಂತೆ ಕರೆ ಗಂಟೆ ಮೊಳಗಿತು.ಎದ್ದು ಬಾಗಿಲು ತೆರೆದ.ಪ್ರಿಯಾ!
ತಾನು ರಚಿಸಿದ ಇಪ್ಪತ್ತೊಂದರ ಹುಡುಗಿಯೇ ಜೀವಂತವಾಗಿ ಎದುರು ನಿಂತಂತೆ ಕಂಡಿತು."ಒಳಗೆ ಬರಬಹುದೆ?" ಪ್ರಶ್ನೆ ಆದರಪೂರ್ವಕವಾಗಿರಲಿಲ್ಲ. ಶಿವಚಂದ್ರ ಪಕ್ಕಕ್ಕೆ ಜರುಗಿ ನಿಂತು ಆಹ್ವಾನಿಸಿದ.ಅವಳು ಉಪಚರಿಸಿಕೊಳ್ಳದೆ ಮೆತ್ತಗಿನ ಕುರ್ಚಿಯೊಂದನ್ನು ಎಳೆದು ಕುಳಿತಳು. ಶಿವಚಂದ್ರ ಚಿತ್ರವನ್ನು ಅಟ್ಟಣಿಗೆಯಿಂದ ತೆಗೆದು ಕಿಟಕಿಯ ಪಕ್ಕಕ್ಕಿಟ್ಟ.
"ಹೇಳಿ, ತಾವ್ಯಾರು?" ಅವಳ ಪಕ್ಕದ ಕುರ್ಚಿಯನ್ನು ಎಳೆದು ಎದುರಿಗೆ ಕುಳಿತ. ಹುಡುಗಿಯ ಮುಖವಿನ್ನೂ ಬಿಗಿದುಕೊಂಡೇ ಇತ್ತು."ಕಾವೇರಮ್ಮ ನಿಮ್ಮ ಬಳಿ ಬಂದಿದ್ದು ನನಗೆ ಗೊತ್ತು. ಜೀವಂತವಾಗಿರುವವರಿಗೆ ಮದುವೆ ಮಾಡಿಸೋದಿಕ್ಕೆ ಅಡ್ಡಿ ಮಾಡಿದೋರು ಸತ್ತವರಿಗೆ ಮದುವೆ ಮಾಡಿಸೋದು ತಮಾಷೆ ಅನಿಸ್ತಿದೆ ಶಿವಚಂದ್ರ" ನಸು ನಗುವಿತ್ತು ಮಾತಿನಲ್ಲಿ. ಕಲಾವಿದನಿಗೆ ಆಶ್ಚರ್ಯವಾಯಿತು. ಪ್ರಿಯಾಳನ್ನೇ ಹೋಲುತ್ತಿದ್ದಾಳೆ! ಇವಳು ಪ್ರಿಯಾ?!"ತಾವು ಯಾರೂಂತ ಹೇಳಿ?" ಅದನ್ನು ತಿಳಿದುಕೊಳ್ಳದೆ ಮುಂದಿನದು ಬಗೆಹರಿಯದೆನ್ನುವ ಸಾಮಾನ್ಯ ಪ್ರಜ್ಞೆಯೊಂದು ಹಾಗೇ ಪ್ರಶ್ನಿಸಿತು.
"ನಾನು..." ಮಾತು ನಿಲ್ಲಿಸಿ ಶಿವಚಂದ್ರನನ್ನೇ ತೀಕ್ಷ್ಣ ನೋಟದಿಂದ ನೋಡಿದಳು. ಮತ್ತೆ ಮುಂದುವರಿಸಿದಳು."...ನಾನು ಅಪ್ಸರಾ. ವಿಕ್ರಾಂತನನ್ನು ತುಂಬಾ ಇಷ್ಟಪಟ್ಟೋಳು. ಅವನ ಜೊತೆಗೆ ನನ್ನ ಮದುವೆ ಕೂಡ ನಿಷ್ಕರ್ಷವಾಗಿತ್ತು. ಹಾಗಿರುವಾಗ ಅವನ ಜೊತೆಗೆ ಯಾವ ಹೆಣ್ಣನ್ನೂ ನಾನು ಸಹಿಸೋದಿಲ್ಲ. ನೀವು ಒಪ್ಪಿಕೊಂಡಿರೋ ಕೆಲಸವನ್ನು ದಯವಿಟ್ಟು ನಿಲ್ಲಿಸಿ. ಇಲ್ಲಾಂದ್ರೆ ಪರಿಣಾಮ ಚೆನ್ನಾಗಿರೋದಿಲ್ಲ" ಅವಳು ತಟ್ಟನೆ ಎದ್ದು ಕಿಟಕಿಯ ಬಳಿಯಿದ್ದ ಚಿತ್ರವನ್ನು ತದೇಕ ದೃಷ್ಟಿಯಿಂದ ನೋಡುತ್ತಾ ನಿಂತಳು.
"ಓಹೋ! ಅಷ್ಟು ಬೇಗ ನಿಮ್ಮ ಕೆಲಸ ಮುಗಿಸಿದ್ರಾ?" ಅವನು ಎದ್ದು ನಿಲ್ಲುವಷ್ಟರಲ್ಲಿ ಅವಳು ಎರಡು ಫೋಟೊಗಳ ಜೊತೆಗೆ ಅದನ್ನೂ ಹಿಡಿದುಕೊಂಡು ಹೊರಗೆ ಧಾವಿಸಿದಳು. ಶಿವಚಂದ್ರ ಅಸಹಾಯಕನ ಹಾಗೆ ನಿಂತೇ ಇದ್ದ.
***
ಪೊಲೀಸ್ ಠಾಣೆಯ ಒಳಗೆ ನಡೆದ ಶಿವಚಂದ್ರ ಪೊನ್ನಪ್ಪನನ್ನೂ ಕರೆದ. ವಿಧೇಯನಂತೆ ನಡು ಬಾಗಿಸಿ ಅಧಿಕಾರಿಗೆ ವಂದಿಸಿದ ಪೊನ್ನಪ್ಪನ ದೇಹ ಮೆಲ್ಲಗೆ ಕಂಪಿಸುತ್ತಿತ್ತು. ಹೀಗೆ ಜೀವನದಲ್ಲಿ ಠಾಣೆಯ ಮೆಟ್ಟಿಲು ಹತ್ತುವೆನೆಂಬ ಆಲೋಚನೆಯೇ ಇರಲಿಲ್ಲ. ಮನಸ್ಸು ಕೆಡಿಸಿಕೊಂಡ ಕಾವೇರಿಯ ಕಣ್ಮರೆ ದಿಗಿಲು ಹುಟ್ಟಿಸಿತ್ತು.
ಅಧಿಕಾರಿ ತೋರಿಸಿದ ಕುರ್ಚಿಯಲ್ಲಿ ಕುಳಿತ ಇಬ್ಬರೂ ತಮ್ಮ ತಮ್ಮ ಸಮಸ್ಯೆಯನ್ನು ಮುಂದಿಟ್ಟರು. ಇಬ್ಬರ ಸಮಸ್ಯೆಯೂ ಒಂದೇ ದಾರಿಯಲ್ಲಿ ಸಾಗುತ್ತಿರುವುದನ್ನು ಗುರುತಿಸಿದ ಅಧಿಕಾರಿ ದೂರು ಸಲ್ಲಿಸುವಂತೆ ಹೇಳಿ, ಎಫ್.ಐ.ಆರ್ ಸಿದ್ಧಪಡಿಸಿದ.ಅವನಿಗೆ ಸಂಶಯವಿದ್ದದ್ದು ಪೊನ್ನಪ್ಪನ ಮೇಲೆ!
ಎರಡು ದಿನಗಳ ಅಂತರದಲ್ಲಿ ಪೊನ್ನಪ್ಪನನ್ನು ಹುಡುಕಿಕೊಂಡು ಬಂದ ಅಧಿಕಾರಿ ಅವನ ತಲೆಯನ್ನು ಕೊರೆದ. ಅದಕ್ಕೆ ಕಾರಣವೂ ಇತ್ತು.
ವಿಕ್ರಾಂತನ ಸಾವು ಸಹಜವಾದುದ್ದಲ್ಲ ಅನ್ನುವ ಅನುಮಾನ ಹತ್ತಿಕೊಂಡ ಬಳಿಕ ಅಧಿಕಾರಿ ಸುಭಾಷ, ಅದಕ್ಕೆ ಸಂಬಂಧ ಪಟ್ಟ ಫೈಲನ್ನು ತರಿಸಿಕೊಂಡ.
ಕಾರು ಅಪಘಾತವಾಗಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ. ಅದೂ ಮುಂಜಾನೆಯ ನಸುಕಿನ ವೇಳೆಯಲ್ಲಿ. ಕೊಂಡಪಲ್ಲಿಯಿಂದ ಅರವತ್ತು ಕಿಲೋ ಮೀಟರ್ ದೂರದಲ್ಲಿ ಅಪಘಾತ ನಡೆದಿರುವುದು. ಆದರೆ ಪೊನ್ನಪ್ಪ ಅಪಘಾತ ನಡೆದು ಐದು ನಿಮಿಷದಲ್ಲಿಯೇ ಅಲ್ಲಿ ಪ್ರತ್ಯಕ್ಷನಾಗಿದ್ದ. ಈ ಹೇಳಿಕೆ ಫೈಲಿನಲ್ಲಿತ್ತು! ಅಪಘಾತದ ಸುದ್ಧಿ ತಲುಪಿದ ಕೂಡಲೇ ಅರವತ್ತು ಕಿಲೋಮೀಟರ್ ದಾರಿಯನ್ನು ಅಷ್ಟು ಬೇಗನೆ ಕ್ರಮಿಸುವುದು ಅಸಾಧ್ಯ!
"ಪೊನ್ನಪ್ಪ, ಈಗ ಹೇಳಿ... ನಿಮ್ಮ ನಾದಿನಿ ಪೂರ್ಣ ಸತ್ತ ಬೆನ್ನಿಗೆ, ಅಂದ್ರೆ... ಒಂದು ತಿಂಗಳಿನಲ್ಲಿ ವಿಕ್ರಾಂತ ಕೂಡ ಸತ್ತಿದ್ದಾನೆ. ಅವನ ಸಾವು ಅಸಹಜವಾದುದು" ಅಧಿಕಾರಿ ಸಂಶಯದ ನೋಟ ಚೆಲ್ಲಿದ. ಪೊನ್ನಪ್ಪನ ಮುಖ ಬಿಳಚಿಕೊಂಡಿತು.
"ನಮ್ಮ ಪೂರ್ಣ ವಿಕ್ರಾಂತನನ್ನು ತುಂಬಾ ಮೆಚ್ಚಿಕೊಂಡಿದ್ಲು. ಅವರಿಬ್ಬರಿಗೆ ಮದುವೆ ಮಾಡುವೂದೂಂತ ನಿರ್ಧಾರವಾಗಿತ್ತು. ಆದರೆ ಪೂರ್ಣಳನ್ನ ಮದುವೆಯಾಗುವುದಕ್ಕೆ ವಿಕ್ರಾಂತ ತಯಾರಾಗಿರಲಿಲ್ಲ. ಇದರಿಂದ ನೊಂದ ಪೂರ್ಣ ಆತ್ಮಹತ್ಯೆ ಮಾಡಿಕೊಂಡ್ಲು""ಇಲ್ಲ, ಪೂರ್ಣಾಳ ಆತ್ಮಹತ್ಯೆಯ ಹಿಂದೆ ವಿಕ್ರಾಂತನ ಸಾವು ಸಂಭವಿಸಿದೆ. ಈ ಸಾವು ಅಪಘಾತದಿಂದಾದದ್ದಲ್ಲ. ಇದೊಂದು ಪೂರ್ವ ನಿಯೋಜಿತ ಕೊಲೆ"
ಪೊನ್ನಪ್ಪ ಉಗುಳು ನುಂಗಿಕೊಂಡು ಅಧಿಕಾರಿಯತ್ತ ಆತಂಕದ ನೋಟ ಹರಿಸಿ ಹೇಳಿದ."ತನ್ನ ತಂಗಿ ಪೂರ್ಣ ಸತ್ತ ನಂತರ ಕಾವೇರಿಗೆ ಮತಿಭ್ರ್‍ಅಮಣೆಯಾಗಿ, ನಮ್ಮ ಸತ್ತ ಮಗುವೇ ಇದಕ್ಕೆ ಕಾರಣಾಂತ ತಿಳಿದುಕೊಂಡ್ಲು..."
ಅಧಿಕಾರಿ ಅವನ ಮಾತನ್ನು ಅರ್ಧಕ್ಕೆ ನಿಲ್ಲಿಸಿದ.
"ಅದು ಆಮೇಲಿನ ಮಾತು. ಪೂರ್ಣ ಹಾಗೂ ವಿಕ್ರಾಂತನ ಮದುವೆಯ ಕನಸು ಕಂಡಿದ್ದ ಕಾವೇರಮ್ಮಾ... ವಿಕ್ರಾಂತ ಇನ್ನೊಂದು ಹೆಣ್ಣಿನ ಜೊತೆಗೆ ಓಡಾಡುವುದನ್ನು ಸಹಿಸಲಿಲ್ಲ. ಪೂರ್ಣನ ಮುಂದಿಟ್ಟುಕೊಂಡು ಅಪ್ಸರಾನ ಅವನಿಂದ ದೂರ ಮಾಡೋ ಪ್ರಯತ್ನ ಮಾಡಿದ್ಲು. ಆದರೆ ಇದರಿಂದ ಬೇಸತ್ತ ಪೂರ್ಣ ಆತ್ಮಹತ್ಯೆ ಮಾಡಿಕೊಂಡ್ಲು. ಇದೆಲ್ಲಾ ಆಗಿದ್ದು ವಿಕ್ರಾಂತನಿಂದಾಂತ ತಿಳಿದ ನೀವು ಅಪ್ಸಾರನನ್ನು ಅವನಿಂದ ಬೇರ್ಪಡಿಸುವುದಕ್ಕೆ ಅವನನ್ನೇ ಕಾರು ಅಪಘಾತಾಂತ ಮಾಡಿ ಮುಗಿಸಿದ್ರಿ"
"ಇಲ್ಲ, ಅವನ ಸಾವಿನ ಹಿಂದೆ ಆ ಹುಡುಗಿಯದ್ದೆ ಕೈವಾಡವಿತ್ತು"
"ಹಾಗಾದ್ರೆ ಅವಳು ಹುಚ್ಚು ಹಿಡಿದ ನಿಮ್ಮ ಕಾವೇರಿಯನ್ನು ಯಾಕೆ ಉಪಚರಿಸುತ್ತಿದ್ಲು?"ಪೊನ್ನಪ್ಪ ಆಶ್ಚರ್ಯದಿಂದ ಅಧಿಕಾರಿಯತ್ತ ನೋಡಿದ. ಅಧಿಕಾರಿ ಮುಂದುವರಿಸಿದ.
"ನೋಡಿ ಪೊನ್ನಪ್ಪ, ನೀವು ಸತ್ಯವನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಕಾವೇರಮ್ಮನ್ನೇ ಸತ್ಯವನ್ನು ಅಪ್ಸರಾಳ ಮುಂದೆ ಹೇಳಿದ್ದಾಳೆ. ಮನಸ್ಸಿನ ನೆಮ್ಮದಿ ಹಾಳಾಗಿದೇಂತ ಅವಳನ್ನೇ ಆಶ್ರಯಿಸಿದ್ದಾಳೆ. ಅವಳು ಉಪಚರಿಸಿದ್ದು ಮಾತ್ರವಲ್ಲ, ಶಿವಚಂದ್ರನಿಂದ ಹಾರಿಸಿಕೊಂಡು ಹೋಗಿರೋ ಚಿತ್ರವನ್ನೂ ಹಿಂದಕ್ಕೆ ಕೊಟ್ಟಿದ್ದಾಳೆ. ಆದ್ರೆ ಆ ಹುಡುಗಿ ಈಗಲೂ ಹೇಳೋದೇನು ಗೊತ್ತಾ? ವಿಕ್ರಾಂತನ ಜೊತೆಗೆ ಯಾವ ಹುಡುಗಿಯೂ `ಸಂಗಾತಿ'ಯಾಗೋದನ್ನು ಅವಳು ಇಚ್ಛಿಸೋದಿಲ್ಲವಂತೆ. ಅದಕ್ಕೆ ಅವಳದ್ದೇ ಭಾವಚಿತ್ರದ ಜೊತೆಗೆ ವಿಕ್ರಾಂತನ ಚಿತ್ರ ಬರಿಬೇಕೂಂತ ಹಠ ಹಿಡಿದ್ದಿದ್ದಾಳೆ. ಕಲಾವಿದ ಒಪ್ಪಿಕೊಂಡಿದ್ದಾನೆ. ಈಗ ಕಾನೂನಿನ ಪ್ರಕಾರ ನೀವು ಅಪರಾಧಿ ಪೊನ್ನಪ್ಪ"
ಪೊನ್ನಪ್ಪ ತಲೆ ತಗ್ಗಿಸಿ ಕುಳಿತ.

No comments: