Monday, March 22, 2010

ನಾನು ಲೈಂಗಿಕ ಕಾರ್ಯಕರ್ತಳು - ನಳಿನಿ ಜಮೀಲಾ


ಆತ್ಮ ಕಥೆಯಲ್ಲಿ ಮುಚ್ಚು ಮರೆಯಿಲ್ಲದೆ ಎಲ್ಲವನ್ನೂ ಹೇಳಿಕೊಳ್ಳುವುದು ಸರಿಯಾದ ಒಂದು ದೃಷ್ಟಿಕೋನ. ಆತ್ಮಕಥೆಗಳು ಒಂದು ರೀತಿಯ ಮಾದರಿ ಮತ್ತು ಮಾರ್ಗದರ್ಶನ ನೀಡಬಲ್ಲ ಬರಹ ಸಮೂಹವೂ ಆಗಿರಬಹುದು. ಉದಾಹರಣೆಗೆ ‘ನನ್ನ ಆತ್ಮಕಥೆ’ ಅಥವಾ ‘ಸತ್ಯಾನ್ವೇಷಣೆ’ ಗಾಂಧೀಜಿಯವರ ಆದರ್ಶಗಳನ್ನು ಎತ್ತಿ ತೋರಿಸುವ ಆತ್ಮಕಥನ. ಕೆಲವೊಂದು ವ್ಯತಿರೀಕ್ತಗಳನ್ನು ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿರುವುದರಿಂದ ಅದನ್ನು ‘ಸತ್ಯ’ದ ಶೋಧನೆಯೆಂದರೂ ತಪ್ಪಲ್ಲ. ಕೆ.ಟಿ. ಗಟ್ಟಿಯವರ ‘ತೀರ’ - ಶೈಕ್ಷಣಿಕ ವಿಷಯದ ಶೋಷಿತ ವರ್ಗದ ದನಿಯಾಗಿದೆ. ಶಾಂತರಾಮ ಸೋಮಯಾಜಿಯವರ ‘ಮೇರಿಯ ಕಥೆ’ ಕಾನ್ಸರ್ನ ವಿರುದ್ಧ ಹೋರಾಡಿದ ಹೆಣ್ಣೊಬ್ಬಳ ಅಸಹಾಯಕ ಕೂಗನ್ನು ಮಾರ್ದನಿಸಿದೆ. ಕಮಲದಾಸ್ ಅವರ ‘ನನ್ನ ಆತ್ಮಕಥೆ’ಯಲ್ಲಿ ‘ಹೆಣ್ಣು’ ‘ಈ ಶತಮಾನದ ಮಾದರಿ’ ಹೆಣ್ಣು ಅನ್ನುವುದನ್ನು ತೋರಿಸುತ್ತದೆ.

ಅದೇ ರೀತಿ ಒಬ್ಬ ಸೆಕ್ಸ್ ವರ್ಕರ್ ತನ್ನ ಆತ್ಮಕಥೆಯನ್ನು ಬರೆದರೆ ಅದರಿಂದ ಸಮಾಜಕ್ಕೆ ಏನು ಸಂದೇಶವಿದೆ ಅನ್ನುವ ಸಂದೇಹ ಸಹಜ. ಇಲ್ಲಿ ನಳಿನಿ ಜಮೀಲಾ ತಮ್ಮ ‘ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ’ ದಲ್ಲಿ ಹೋರಾಟಗಾರ್ತಿಯಾಗಿ, ಬಂಡಾಯಗಾರ್ತಿಯಾಗಿ ಮತ್ತು ‘ಕಾಯಕವೇ ಕೈಲಾಸ’ ಎಂದು ವೃತ್ತಿ ಧರ್ಮವನ್ನು ಪಾಲಿಸುವ ಪ್ರಾಮಾಣಿಕ ಹೆಣ್ಣಾಗಿ ಗುರುತಿಸಿಕೊಳ್ಳುತ್ತಾರೆ. ಹೀಗೆ ಸಮಾಜದಿಂದ ಕೀಳಾಗಿ ಕಾಣುವ ವೇಶ್ಯೆಯರ ಬಗ್ಗೆ ಗೆಜ್ಜೆಪೂಜೆ, ಹಗಲುಕನಸು, ಹೂವುಹಣ್ಣು, ಮಸಣದ ಹೂ, ಮುಂತಾದ ಕಾದಂಬರಿಗಳಲ್ಲಿ ಸಮಾಜ ಮುಖಿಯಾದ ಸಮಸ್ಯೆಗಳನ್ನು ಪ್ರತಿಬಿಂಬಿಸಿದರೆ, ತಮಿಳ್ ಸೆಲ್ವಿ ಅವರು ಅನುವಾದಿಸಿದ ಹಿಜಡಾಗಳ ಬಗೆ ಬರೆದ ‘ನಾನು ಅವನಲ್ಲ ಅವಳು’ ಆತ್ಮಕಥೆಯಲ್ಲಿ ಸಮಾಜದಿಂದ ಶೋಷಿತ ವರ್ಗಕ್ಕೆ ಸರಿದಿರುವ ಹಿಜಡಾಗಳ ಬಗ್ಗೆ ಮತ್ತು ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಕಥೆಯಿದೆ.

ಆದರೆ ಒಬ್ಬ ಸೆಕ್ಸ್ ವರ್ಕರ್ ತನ್ನ ಆತ್ಮ ಕಥೆಯನ್ನು ಬರೆದರೆ ಅವಳ ಹೋರಾಟ ಯಾವುದಕ್ಕಾಗಿ? ಕೇವಲ ಹಣಗಳಿಸುವುದಕ್ಕಾಗಿ ಇಂತಹ ಒಂದು ದಾರಿಯನ್ನು ಹುಡುಕಬೇಕಿತ್ತೆ? ಇಲ್ಲಿ ಅವಳಿಗೆ ಅನ್ಯಾಯವಾಗಿದೆ; ಶೋಷಣೆಗೆ ಒಳಗಾಗಿದ್ದಾಳೆ ಒಪ್ಪಿಕೊಳ್ಳಬಹುದು. ಲೇಖಕಿಯೇ ಹೇಳಿಕೊಳ್ಳುವಂತೆ ತಾನು ಶ್ರೀಮಂತ ಕುಟುಂಬದ ಹಿನ್ನಲೆಯಿಂದ ಬಂದವಳು, ಲೈಂಗಿಕ ಶೋಷಣೆಯಾಗಿದೆ. ಆದರೆ ಅದನ್ನು ಮೆಟ್ಟಿ ನಿಲ್ಲುವ ಆತ್ಮ ಸ್ಥೈರ್ಯವನ್ನು ಬಿಟ್ಟು, ಅದನ್ನೂ ಒಂದು ವೃತ್ತಿಯಾಗಿ ಮುಂದುವರಿಸುವ ಅನಿವಾರ್ಯತೆ ಇತ್ತೆ? ಎಂಬ ಪ್ರಶ್ನೆ ಎದುರಾಗುತ್ತದೆ.

ಇಲ್ಲಿ ಮೆಚ್ಚಿಕೊಳ್ಳಬೇಕಿರುವುದು ಯಾವುದೇ ಅಳುಕಿಲ್ಲದೆ ಮುಕ್ತವಾಗಿ ತಾನು ಆ ವೃತ್ತಿಯಲ್ಲಿ ಏನೆಲ್ಲಾ ಸುಖ, ದುಃಖಗಳನ್ನು ಅನುಭವಿಸಿದೆಯೆನ್ನುವ ಚಿತ್ರಣ. ಆದರೆ ಇದು ಯಾವ ಆದರ್ಶವನ್ನು ತೋರಿಸುತ್ತದೆ. ಅಂತಹ ವರ್ಗಕ್ಕೆ ಮಾತ್ತು ಆ ದಂಧೆಗೊಳಗಾದವರಿಗೆ ಯಾವ ರೀತಿ ಬದುಕಬೇಕೆನ್ನುವುದನ್ನು ತಿಳಿಸುತ್ತದೆಯೆ? ಒಂದು ಆರೋಗ್ಯ ಮುಖಿಯಾದ ಸಮಾಜಕ್ಕೆ ಇದರಿಂದ ಏನು ಪ್ರಯೋಜನ? ಒಬ್ಬ ಸೆಕ್ಸ್ ವರ್ಕರ್ ಆಗಿದ್ದು ಅದೇ ಬದುಕಿನ ಸಾಧನೆಯಲಲ್ಲಿ, ಅದನ್ನು ಮೆಟ್ಟಿ ಏನಾದರೂ ಸಾಧಿಸಿದ್ದರೆ ನಿಜವಾಗಿಯೂ ಇಂತಹ ಆತ್ಮಕಥೆಗಳು ಇನ್ನಷ್ಟು ಬರಲೆಂದು ಸಮಾಜ ನಿರೀಕ್ಷಿಸಬಹುದು.

ಇಂತಹ ಕಾನೂನು ಬಾಹಿರ ವೃತ್ತಿಯಲ್ಲಿ ದೌರ್ಜನ್ಯ ದಬ್ಬಾಳಿಕೆಗಳು ಸಹಜ. ಶೋಷಣೆಗೊಳಗಾದವರನ್ನು ಶೋಷಿಸುತ್ತಲೇ ಅವರಿಂದ ಪ್ರಯೋಜನ ಪಡೆದುಕೊಂಡು ಅವರಿಗೆ ವಿರುದ್ಧವಾಗಿ ನಿಲ್ಲುವ ಪ್ರಸಂಗಗಳು ಸರ್ವೇ ಸಾಮಾನ್ಯ. ಅದರಲ್ಲೂ ಪೊಲೀಸ್ ದೌರ್ಜನ್ಯ ತೀರ ವಿಪರೀತ ಮಟ್ಟದಾಗಿರುತ್ತದೆಯೆನ್ನುವುದನ್ನು ಲೇಖಕಿ ನಿರ್ಭಿಡೆಯಿಂದ ಬರೆದಿದ್ದಾರೆ.

‘ಹೂವು ಹಣ್ಣು’ ಕಾದಂಬರಿಯಲ್ಲಿ ಒಬ್ಬ ತಾಯಿ, ತನ್ನ ಮಗಳು ತನ್ನಂತೆ ಈ ವೃತ್ತಿಗೆ ಇಳಿಯಬಾರದೆನ್ನುವ ತುಡಿವಿರುವಂತೆಯೇ, ಇಲ್ಲಿ ಲೇಖಕಿಗೆ ತನ್ನ ಮಗಳ ಮೇಲಿರುವ ಕಳಕಳಿ ಅತೀ ಸೂಕ್ಷವಾಗಿದೆ. ‘ತನ್ನ ಮಗಳು ಈ ವೃತ್ತಿ ಬಯಸುವುದಾದರೆ ಅವಳಿಗೆ ಬಿಟ್ಟ ಅವಕಾಶ’ ಎಂದು ಹೇಳಿಕೊಂಡರೂ ಇಲ್ಲಿ ಅವಳನ್ನು ಒಂಟಿಯಾಗಿ ಬಿಟ್ಟು ಹೋಗುವಾಗ ಅಥವಾ ಇನ್ನೊಬ್ಬರ ಮನೆಯಲ್ಲಿ ಬಿಟ್ಟಿರುವಾಗ ತಾಯಿ ಹೃದಯ ಮಗಳ ಯೋಗ ಕ್ಷೇಮವನ್ನು ಬಯಸುವುದು, ತನ್ನಂತೆ ಮಗಳು ಈ ವೃತ್ತಿಗೆ ಇಳಿಯಬಾರದೆನ್ನುವ ಒಂದು ತುಡಿತದಿಂದಲ್ಲವೆ?
ಮೇಲ್ನೋಟಕ್ಕೆ ನಾವು ‘ಹಾಗೆ ಹೀಗೆ’ ಅನ್ನುವ ಸ್ಟೇಟ್ಮೆಂಟ್ಗಳನ್ನು ಅಥವಾ ಹೇಳಿಕೆಗಳನ್ನು ಸುಲಭದಲ್ಲಿ ಹೇಳಿ ಬಿಡಬಹುದು. ಆದರೆ ಅದನ್ನು ಪಾಲಿಸುವುದು ಅಷ್ಟೆ ಕಷ್ಟದ ಕೆಲಸ.

ಲೇಖಕಿ ಈಗ ಸಮಾಜದ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ಗುರುತಿಸಿಕೊಳ್ಳುವಷ್ಟರಮಟ್ಟಿಗೆ ಬೆಳೆದಿದ್ದಾರೆ. ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಡಾಕ್ಯುಮೆಂಟರಿಗಳನ್ನು ಕೂಡ ತಯಾರಿಸಿದ್ದಾರೆ. ದೇವದಾಸಿಯಂತಹ ಪದ್ಧತಿಯ ವಿರುದ್ಧ ದನಿ ಎತ್ತುವ ಲೇಖಕಿ ಸ್ವತಃ ಅದೆಷ್ಟೊ ಶೋಷಣೆಗೊಳಗಾದ ಹೆಣ್ಣುಗಳನ್ನು ಗುರುತಿಸಿ ಈ ಪಿಡುಗಿನಿಂದ ಪಾರು ಮಾಡಬಹುದಲ್ಲವೆ? ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪವಾದರೂ ಪ್ರಯತ್ನಿಸಬಹುದಲ್ಲವೆ? ಅವರ ಬದುಕಿನ ಕಷ್ಟ, ಕೋಟಲೆಗಳನ್ನು ತಿಳಿದಿರುವ ಲೇಖಕಿ ಅಂತಹ ಒಂದು ಸಾಮಾಜಿಕ ಪಿಡುಗನ್ನು ನಿರ್ಮೂಲನ ಮಾಡುವಂತಹ ಕಾರ್ಯಗಳನ್ನು ಎತ್ತಿಕೊಳ್ಳಬಾರದೇಕೆ? ಈ ಮಾತು ಯಾಕೆಂದರೆ ಇಲ್ಲಿ ಅದನ್ನೇ ವೃತ್ತಿಯಾಗಿ ಸ್ವ ಇಚ್ಚೆಯಿಂದ ತೊಡಗಿಸಿಕೊಳ್ಳುವರು ವಿರಳ. ಮೋಸ ವಂಚನೆಯಿಂದಲೇ ಇಂತಹ ದಂಧೆಗೆ ಇಳಿಯುವವರು ಹೆಚ್ಚು. ಇದನ್ನು ವ್ಯವಹಾರ ಅಂದುಕೊಂಡರೂ ಶೋಷಣೆಯಿಂದಲೇ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವ ಅದೆಷ್ಟು ಮುಗ್ಧ ಅಮಾಯಕ ಹೆಣ್ಣುಗಳನ್ನೂ ತಾವೇ ಹುಡುಕಿ ‘ಜ್ವಾಲಾಮುಖಿ’ ಯ ಮೂಲಕ ಹೋರಾಟ ನಡೆಸಿ ಅವರನ್ನು ಮುಕ್ತರಾಗಿಸಬಹುದು. ಯಾರಿಗೆ ಈ ವೃತ್ತಿಯಿಂದ ಹೊರಬರಬೇಕೆನ್ನುವ ಇಚ್ಚೆ ಇದೆಯೊ ಅವರಿಗೆ ಮಾತ್ರ ಸಹಾಯ ಮಾಡುವ ಬದಲು ಯಾರು ಬಲವಂತವಾಗಿ ವೃತ್ತಿಗೆ ಇಳಿದಿದ್ದಾರೋ ಅವರನ್ನು ಗುರುತಿಸಿ ಇಂತಹ ದಂಧೆಯಿಂದ ಮುಕ್ತಗೊಳಿಸಬಹುದಲ್ಲವೆ?

ಸಾಮಾಜಿಕ ವ್ಯವಸ್ಥೆಯಾದ ಕೌಟುಂಬಿಕ ಜೀವನವನ್ನು ಆದರ್ಶ ಪ್ರಾಯವೆಂದು ನಂಬಂದ ಲೇಖಕಿ ತನ್ನ ರಕ್ಷಣೆಯನ್ನು ಒಪ್ಪಿಕೊಂಡಿರುವುದು ಮಗುವಿನ ತಾಯಿಯಾದಾಗ. ಈ ಆಸರೆ ಪಡೆದಿದ್ದು ಒಬ್ಬ ‘ಗಂಡ’ ಅನ್ನುವ ವ್ಯಕ್ತಿಯಿಂದ. ಗಂಡ, ಮಗು ಮತ್ತು ಆಸರೆ ಕೌಟುಂಬಿಕ ಜೀವನದ ಆದರ್ಶಗಳಲ್ಲವೆ? ಇಂತಹ ಅನೇಕ ವ್ಯತಿರೀಕ್ತಗಳು ಮತ್ತು ಅಪೂರ್ಣ ವಿಷಯಗಳಿಂದ ಲೇಖಕಿ ಏನನ್ನು ಹೇಳ ಹೊರಟಿದ್ದಾರೆ ಅನ್ನುವುದು ತಿಳಿಯುವುದಿಲ್ಲ.

ಲೈಂಗಿಕ ದುಡಿಮೆಗೂ ಸುಖ, ಸಂತೋಷಗಳ ಸೌಂದರ್ಯದ ಉತ್ಪಾದನೆಗೂ ಸಂಬಂಧ ಕಲ್ಪಸುವ ಲೇಖಕಿ ಲೈಂಗಿಕ ಕೆಲಸವನ್ನು ‘ಆಪ್ತ ಸಲಹೆ’ ಮತ್ತು ‘ಚಿಕಿತ್ಸೆ’ ಗಳಿಗೆ ಪ್ರತಿಪಾದಿಸಿರುವುದನ್ನು ಹೊಸ ದೃಷ್ಟಿಯಿಂದ ಯೋಚಿಸಬೇಕಾಗಿದೆ.

ಒಬ್ಬ ಲೈಂಗಿಕ ಸೇವಕಿಯಾಗಿ, ಒಬ್ಬ ಮಗಳಾಗಿ, ತಾಯಿಯಾಗಿ, ಪತ್ನಿಯಾಗಿ ಹೋರಾಟದ ಹಾದಿ ಹಿಡಿದು ‘ಆತ್ಮ ಕಥೆ’ಯನ್ನು ಬರೆದಿರುವುದು, ಸಮಾಜದ ಇನ್ನೊಂದು ಪಾರ್ಶ್ವದಲ್ಲಿ ನಡೆಯುವ ದಾರುಣವಾದ ವಾಸ್ತವಿಕತೆಯನ್ನು ತೆರೆದಿಡುತ್ತದೆ. ಈ ಕೃತಿಯನ್ನು ಕೆ. ನಾರಾಯಣಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದನ್ನು ಸೃಷ್ಟಿ ಪಬ್ಲಿಕೇಶನ್, ವಿಜಯನಗರ, ಬೆಂಗಳೂರು ಇವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಇದರ ಬೆಲೆ ರೂ. ೧೫೦/- ಮಾತ್ರ.

No comments: