Tuesday, December 1, 2009

‘ಇಂಗ್ಲಿಷ್ ಮಂಗ’ ಸುಲಲಿತ ಕಥೆಗಳ ಸಂಕಲನ


ಸಲೀಸಾಗಿ ಓದಿಸಿಕೊಂಡು ಹೋಗುವುದು ಕಥೆಯ ಮುಖ್ಯ ಲಕ್ಷಣ. ಶಾಂತರಾಮ ಸೋಮಯಾಜಿ ಅವರ ‘ಇಂಗ್ಲಿಷ್ ಮಂಗ’ ಕಥಾಸಂಕಲನದಲ್ಲಿರುವ ಕಥೆಗಳಿಗೆ ಅಂತಹ ಲಕ್ಷಣವಿರುವುದರಿಂದ ಓದುಗನಿಗೆ ಅವುಗಳು ಆಪ್ತವೆನಿಸುತ್ತವೆ. ಬಹಳ ಸರಳವಾದ ಶೈಲಿ, ಭಾಷೆಯ ಮಿತವಾದ ಬಳಕೆಯಿಂದಾಗಿ ಇಲ್ಲಿನ ಕಥೆಗಳು ಇಷ್ಟವಾಗುತ್ತವೆ. ಎಲ್ಲಾ ಕಥೆಗಳಲ್ಲಿಯೂ ದಕ್ಷಿಣ ಕನ್ನಡ ಮತ್ತು ಉಡುಪಿಯ ಪರಿಸರದಲ್ಲಿರುವ ಸನ್ನಿವೇಶ, ಆಡು ಭಾಷೆಯ ಬಳಕೆ ಸುಂದರವಾಗಿ ಚಿತ್ರಿತವಾಗಿದೆ.
‘ಕಥಾ ಸೃಷ್ಟಿ ನನಗೆ ಅತ್ಯಂತ ಆನಂದ ಕೊಡುವ ಚಟ. ನನ್ನ ಪಾಲಿಗೆ ಅದೊಂದು ಅಡ್ವೆಂಚರ್. ಚಾಲೆಂಜ್ನೊಟ್ಟಿಗೆ ಅಗಾಧ ಸಂತೋಷ ತೃಪ್ತಿ ತಂದುಕೊಡುವ ಗೀಳು’ ಇದು ಲೇಖಕರ ಮಾತು. ಈ ಮಾತಿನಲ್ಲಿ ಅತಿಶೋಯಕ್ತಿ ಇರಲಾರದು. ಇಲ್ಲಿನ ಎಲ್ಲಾ ಕಥೆಗಳಲ್ಲಿಯೂ ವಿಭಿನ್ನ ಶೈಲಿಯನ್ನು ಬಳಸಿಕೊಂಡಿರುವುದು ಲೇಖಕನ ಜಾಣ್ಮೆಯನ್ನು ಮತ್ತು ಕಥೆ ಬರೆಯುವಲ್ಲಿರುವ ಪ್ರೀತಿಯನ್ನು ಎತ್ತಿ ಹಿಡಿಯುತ್ತದೆ.
‘ಇಂಗ್ಲಿಷ್ ಮಂಗ’ ಕಥಾಸಂಕಲನದಲ್ಲಿ ಒಟ್ಟು 21 ಕಥೆಗಳಿದ್ದು ಪ್ರತಿಯೊಂದು ಕಥೆಯೂ ಸರಳ, ಸುಂದರವಾಗಿ ಮೂಡಿ ಬಂದಿದೆ. ಗುಜ್ಜೆಗಟ್ಟಿ, ಮನಸ್ಸಿನ ಧರ್ಮ, ಅದೃಷ್ಟದ ಅನ್ನ, ಸ್ವಲ್ಪ ಸ್ವಲ್ಪ, ಇಂಗ್ಲಿಷ್ ಮಂಗ, ಮಠದ ತೋಡು, ಸೀರೆಯ ಜಾತಿ ಕಥೆಗಳು ಹೆಚ್ಚು ಆಪ್ತವೆನಿಸುತ್ತವೆ. ಎಲ್ಲಾ ಕಥೆಗಳು ತಿಳಿ ಹಾಸ್ಯದೊಡೆ ಇದ್ದರೂ, ಕೆಲವೊಂದು ಕಡೆ ಗಂಭೀರ ಸಮಸ್ಯೆಯನ್ನು ಎದುರಿಸುತ್ತಾ, ಕಥೆಗೆ ತಿರುವನ್ನು ನೀಡುತ್ತಾ, ಮತ್ತದೆ ಸುಲಲಿತವಾದ ಉತ್ತರವನ್ನು ಹೇಳುತ್ತಾ ಮುಂದೆ ಸಾಗುತ್ತದೆ."
‘ಗುಜ್ಜೆಗಟ್ಟಿ’ಯಲ್ಲಿ ಸಾವಿನ ಬಗ್ಗೆಗಿರುವ ಮತ್ತು ಸತ್ತ ನಂತರದ ಸ್ವಗತ ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಯಾವತ್ತೊ ಒಮ್ಮೆ ಕಂಡ ರುಚಿಯನ್ನು ಮೆಲುಕು ಹಾಕುತ್ತಾ ಆ ವಸ್ತುವಿಗಾಗಿ ಪರದಾಡಿ, ಕೊನೆಗೂ ಅದರಿಂದ ತೃಪ್ತಿ ಪಡುವುದು ಮನುಷ್ಯನ ಸಹಜ ಗುಣ. ಅದರಂತೆ ಇಲ್ಲಿಯ ಕಥಾನಾಯಕ ದೇವಣ್ಣ ಪೆಲ್ಯರು ಒಂದು ಹಲಸಿನ (ಗುಜ್ಜೆ) ಹಣ್ಣಿಗಾಗಿ ಊರೂರು ಅಲೆಯ ಬೇಕಾಗುವ ಪ್ರಸಂಗ ಎದುರಾಗುತ್ತದೆ.
ಧರ್ಮ ಮತ್ತು ಮನುಷ್ಯನ ಮನಸಿನ ಕುರಿತು ಬರೆದಿರುವ ಕಥೆ ‘ಮನಸ್ಸಿನ ಧರ್ಮ’. ಜಾತೀಯತೆಯ ಪ್ರಶ್ನೆ ಎದುರಾದಾಗ ಅದಕ್ಕೆ ಬಹಳ ಜಾಣ್ಮೆಯಿಂದ ಉತ್ತರ ನೀಡುತ್ತಾ ಸಾಗುವ ಈ ಕಥೆಯು “ಅವನಿಗೆ ಹೇಳಿದೆ, ನೋಡಪ್ಪ ನಾನು ಯುನಿವರ್ಸಿಟಿಯಲ್ಲಿ 36 ವರ್ಷ ಪಾಠ ಮಾಡಿದವನು. ಯಾವುದೇ ಜಾತಿ, ಧರ್ಮ, ಗಂಡು ಹೆಣ್ಣು ಭೇಧ ಭಾವ ಇಲ್ದೆ ಕಲಿಸಿದ್ದೇನೆ. ವಿಧ್ಯಾರ್ಥಿ ಹಿಂದೂ ಆಗಿರ್ಲಿ ಮುಸ್ಲಿಂ ಆಗಿರ್ಲಿ ಕ್ರಿಶ್ಚಿಯನ್ ಆಗಿರ್ಲಿ ಯಾರೇ ಆಗರ್ಲಿ ಎಲ್ರಿಗೂ ಒಂದೇ ಪಾಠ ಮಾಡ್ತಾ ಇದ್ದವ್ನು ಹಾಗಿದ್ದೇರೆ ಅನ್ಯಧರ್ಮಿಯರ ಮೇಲೆ ನನ್ನಲ್ಲಿ ದ್ವೇಷ ಹೇಗೆ ಸಾಧ್ಯ?” ಮನುಷ್ಯನ ಒಳ್ಳೆಯತನವನ್ನು ಗುರುತಿಸಿಕೊಳ್ಳುವುದಕ್ಕೆ ಇದಕ್ಕಿಂತ ಮಿಗಿಲಾದ ಮಾತುಗಳು ಬೇಕಾಗಿಲ್ಲ.
ಶ್ರೀಮಂತಿಕೆಯ ವೈಭವವನು ನವಿರಾಗಿ ಚಿತ್ರಿಸುತ್ತಾ ಅಲ್ಲೂ ಇರುವ ನೋವನ್ನು ಹತಾಶೆಗಳನ್ನು ತೆರೆದಿಡುವ ಕಥೆ ‘ಅದೃಷ್ಟದ ಅನ್ನ’ ಹೆಣ್ಣಿನ ನೋವು ತನಗೆ ತೆಗೆದುಕೊಳ್ಳಲು ಇರುವ ‘ಚಾಯ್ಸ್’ ನಲ್ಲಿ ಗೊಂದಲಗಳನ್ನು ಹೇಳುತ್ತಾ ಸುಖಾಂತ್ಯದಲ್ಲಿ ಕೊನೆಗೊಳ್ಳುವ ಕಥೆ ‘ಒಳ್ಳೆಯವಳು’
ಮನುಷ್ಯನ ಚಹರೆ ಮತ್ತು ಹವ್ಯಾಸಗಳ ಬಗ್ಗೆ ಹೇಳುತ್ತಾ ಸಾಗುವ ಕಥೆ ‘ಸ್ವಲ್ಪ ಸ್ವಲ್ಪ’ ಉಳಿದ ಎಲ್ಲಾ ಕಥೆಗಳಿಗಿಂತ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಓದುಗನನ್ನು ಬಾಲ್ಯಕ್ಕೆ ಕರೆದುಕೊಂಡು ಹೋಗಿ ಹಿಂದಿನ ದಿನಗಳನ್ನು ಕೆದಕಿಬಿಡುತ್ತದೆ. ವಾಸ್ತವಿಕತೆಯಿಂದ ಪ್ಯಾಂಟಿಸಿಯತ್ತ ಜಾರುವ ಕಥೆ ‘ಇಂಗ್ಲಿಷ್ ಮಂಗ’. ಈಗಿನ ಪೀಳಿಗೆಯಾಂತ್ರಿಕ ಬದುಕು ಮತ್ತು ಹೊರಗಿನ ಆಕರ್ಷಣೆಗೆ ತಪ್ಪು ಹೆಜ್ಜೆಗಳನ್ನು ಇಡುವುದನ್ನು ಇಲ್ಲಿ ನವಿರಾಗಿ ನಿರೂಪಿಸಿದ್ದಾರೆ. ಅದೇ ಕೊನೆಗೆ ಆಪ್ತವೆನಿಸಬಹುದಾದ ಸಂದಿಗ್ದತೆ. ಇವೆಲ್ಲಾವನ್ನೂ ‘ಇಂಗ್ಲಿಷ್ ಮಂಗ’ ದ ಜೊತೆಗೆ ಸೇರಿಸಿ ಬರೆದಿರುವ ಉತ್ತಮ ಕಥೆ.
‘ಮಠದ ತೋಡು’ ಕಥೆಯಲ್ಲಿ ಜಾಗ ತೆಗೆದುಕೊಂಡು ಮನೆ ಕಟ್ಟಿಸಿಯೂ ವಾಸವಾಗಲಾರದೆ ಪರವೂರಿಗೆ ಹಿಂತಿರುಗುವ ಸಂಸಾರದ ಕಥೆಯಾದರೆ, ಅಲ್ಲಿ ನಡೆಯುವ ಕುಟಿಲತೆ, ಮೋಸ, ಕೊಲೆಗೆ ಹೇತುವಾಗುವ ವಿಷಯಗಳು ಮಠದ ತೋಡಿನ ಹಾಗೇ ಕೊಳಕಾಗಿ ಹರಿಯುತ್ತಿರುತ್ತದೆ. ಜಾತೀಯತೆಯೆನ್ನುವ ನೀರೀಗ ‘ಹಂದಿಯ ಮೈಯಂತೆ ಕಪ್ಪಾಗಿದೆ.... ಕೊಳೆತ ಮೀನಿನಂತೆ ನಾರುತ್ತಿದೆ. ಒಂದಲ್ಲ ನೂರು ಹೆಣ್ಣು ಮಕ್ಕಳನ್ನು ಮುಳುಗಿಸಿ ಕೊಂದರೂ ಆ ಹೆಣಗಳು, ಮನುಷ್ಯರ ಕಣ್ಣಿಗೆ ಕಾಣಿಸದಷ್ಟು ಕೊಳಕಾಗಿದೆ ಆ ತೊಡಿನ ನೀರು’ ಅನ್ನುವ ಕಥೆಯ ಕೊನೆಯ ವಾಕ್ಯಗಳು ಅಸ್ವಸ್ಥ್ಯ ಸಮಾಜದ ಚಿತ್ರಣವನ್ನು ತೆರೆದಿಡುತ್ತದೆ’
‘ಸೀರೆಯ ಜಾತಿ’ ಮಕ್ಕಳ ಮುಗ್ಧತೆ ಮತ್ತು ಹಿರಿಯಲ್ಲಿರುವ ಜನಾಂಗೀಯಾ ತಾರತಮ್ಯಗಳ ತುಲನೆಯ ಒಂದು ಒಳ್ಳೆಯ ಕಥೆ. ಮಕ್ಕಳಾಗಿರುವಾಗ ಜಾತಿ, ದ್ವೇಷಗಳ ಪ್ರಶ್ನೆಯೇ ಇರುವುದಿಲ್ಲ. ಅದನ್ನು ಕ್ರಮೇಣ ಹಿರಿಯರಿಂದಾಗಿ ಕಲಿತುಕೊಳ್ಳುವ ಮಕ್ಕಳ ಮುಗ್ಧತೆಯನ್ನು ತೆರೆದಿಡುತ್ತದೆ ಈ ಕಥೆ.
ಫ್ಯಾಂಟಸಿಯಂತೆ ಮೂಡಿ ಬಂದಿರುವ ಈಜುವಿದ್ಯೆ; ಪರೀಕ್ಷೆಯ ಆತಂಕ ಸೋಲಿನ ನಡುವೆ ಸಾಕುಪ್ರಾಣಿಯ ಕಡೆಗಿರುವ ಕಾಳಜಿ, ಸ್ನೇಹದ ಕಥೆ ‘ಪರೀಕ್ಷೆ’
‘ಇನಿಯನಿಗೊಂದು ಪತ್ರ’ ವಿರಹಿಯೊಬ್ಬಳ ಅಂತರಂಗದ ತುಮುಲಗಳನ್ನು ಬಿಚ್ಚಿಟ್ಟು ಪರಿಧಿಯಳೊಗೆ ಬೇಯುತ್ತಾ ಬದುಕುವ ಹೆಣ್ಣಿನ ಚಿತ್ರಣ.
‘ಚೇರಂಟೆ’ ಇಂದಿನ ದಿನಗಳಲ್ಲಿ ನಡೆಯುವ ಮೋಸ ವಂಚನೆಯ ಬಗ್ಗೆಯಿದ್ದು ನಾವು ಯಾರನ್ನು ನಂಬಿ ಬಿಡುತ್ತೇವೊ ಅವರಿಂದಲೆ ಮೋಸ ಹೋಗುವ ಸ್ಥಿತಿ ಎದುರಾಗುವ ಕಥೆ.
‘ಗೊಂಬೆಯಾಟ’ ಪ್ರೀತಿ, ಸ್ನೇಹ, ಗೌರವವಿರದ ಬದುಕಿಗೆ ರೋಸಿ ಹೋದ ಅಸಹಾಯಕ ಹೆಣ್ಣಿನ ದನಿಯಾದರೆ, ಪವಾಡ ಸ್ವಾಮೀಜಿಯ ಕಥೆ ‘ಪವಾಡಪುರುಷರು’, ‘ಅಜ್ಜಿ ಮತ್ತು ಬೆಕ್ಕು’, ‘ಚಿಕ್ಕಪ್ಪ’, ‘ಅಕ್ಷರಾಭ್ಯಾಸ’, ‘ಮೀನಾಳ ಗುಟ್ಟು’, ‘ಮಹಾಬಾಲಯ’, ‘ಗುಪ್ತ ಪ್ರತಿಭೆ’ ಮತ್ತು ‘ಪ್ರೀತಿಯಿಂದ’ ಓದಿಸಿಕೊಂಡು ಹೋಗುವ ಇತರ ಕಥೆಗಳು.
ಇತ್ತೀಚಿಗೆ ಪುಟಗಳ ಮಿತಿಗೆ ಇಳಿದಿರುವ ಕಥೆಗಳ ಅವಸ್ಥೆಯಿಂದ ಹೊರಗೆ ಬಂದು ಹುಡುಕಾಡಿದರೆ ‘ಇಂಗ್ಲಿಷ್ ಮಂಗ’ ದಂತಹ ಒಳ್ಳೆಯ ಕಥಾಸಂಕಲನಗಳು ದೊರೆಕಬಹುದು. ಈ ಕೃತಿಯನ್ನು ಹೊರತಂದವರು ಹೇಮಂತ ಸಾಹಿತ್ಯ, ಬೆಂಗಳೂರು ಇವರು.

No comments: