Monday, October 13, 2008

ಕಾಣದ ದಾರಿಯಲ್ಲಿ ನಕ್ಷತ್ರಗಳ ಹುಡುಕುತ್ತಾ...

ಕತ್ತಲೆಯಲ್ಲಿ ಹೀಗೆ ನಡೆಯುವಾಗಲೆಲ್ಲಾ ದಾರಿ ತೋರಿಸುತ್ತಿದ್ದ ಕಿರು ದೀಪಗಳ ಸಾಲುಗಳಲ್ಲದ ಸಾಲುಗಳನ್ನು ಎಣಿಸುತ್ತಾ ಸಾಗುವ ಬದುಕಿನ ಅಂತ್ಯ, ಆದಿಯನ್ನೂ ತಿಳಿಯದೆ ಮುಖವೆತ್ತಿದರೆ ಕಾಣುವ, ಕಾಡುವ ನಕ್ಷತ್ರಗಳ ಬೆಳಕೇ ದೊಡ್ಡದೆನಿಸುತ್ತದೆ. ನೋಡುತ್ತಿದ್ದಂತೆ ಕಣ್ಣು ಮಿಟುಕಿಸುತ್ತಲೋ, ದುತ್ತೆಂದೋ ಇನ್ನೆಲ್ಲೋ ಗೋಚರಿಸಿದಂತೆ ಕಣ್ಣು ಮುಚ್ಚಾಲೆಯಾಡುವ ನಕ್ಷತ್ರಗಳ ಲೋಕ, ಭಾವನೆಗಳನ್ನೂ, ಬದುಕಿನಲ್ಲಿ ಒಂದು ಆಶಯವನ್ನೂ ಹುಟ್ಟಿಸಿ ದಾರಿಯನ್ನು ತೋರಿಸುವಾಗ, ಉಂಡ ಮನದ ನೋವುಗಳೆಲ್ಲಾ ಅರಗಿ, ಆಶಾ ದೀಪವೊಂದು ಬೆಳಗಿದಂತೆ ಹೊಸ ಬದುಕು ಪಡೆಯುವ ತವಕ ಉಕ್ಕುತ್ತದೆ.
ಎಲ್ಲರೂ ನನ್ನವರು, ಎಲ್ಲವೂ ನನ್ನವೇ ಅನ್ನುವ ನಕ್ಷತ್ರಗಳ ಮಿಡಿತ, ಮಿನುಗುವ, ಮಿನುಗುತ್ತಲೇ ಕಾಡುವ ಅವುಗಳಲ್ಲಿ ನಾನು ಒಂದಾಗುವ ಕನಸು. ಸ್ವೀಕರಿಸಬಹುದೇ ನನ್ನನ್ನು ತಮ್ಮ ಲೋಕಕ್ಕೆ. ಅಂಧಕಾರವೇ ತುಂಬಿರುವಾಗ ಬೆಳಕನ್ನೇ ಉಣಬಡಿಸಿದೆ; ನನಗೂ ಒಂದು ಸ್ಥಾನವಿರಬಹುದು. ಒಮ್ಮೆಯಾದರೂ ಅಲ್ಲಿದ್ದರೆ ಜಂಜಡಗಳಲ್ಲೆಲ್ಲಾ ಕರಗಿ ಎದೆಯ ಹಾಡು ಮಾರ್ದನಿಸಬಹುದು. ಮತ್ತೆ ಉಲ್ಕೆಯಾಗಿ ಉರಿದು ಹೋದರೂ ಬೇಸರವಿಲ್ಲ. ನಕ್ಷತ್ರಗಳೇ ಬರಬಹುದೆ ನಿಮ್ಮರಮನೆಗೆ? ಕೇಳಿಸಿತೇ ನನ್ನ ಕೂಗು? ಕಾಡುವಾಗಲೊಮ್ಮೆ ಕೇಳಿಯೇ ಬಿಡುವ ತವಕ ನನಗೂನು.
ಬೆಳೆದಾಗ ಬೆಳೆಯದೆ ಬೆಳೆದಂತೆ ಭಾವಿಸಿ, ಹೊತ್ತು, ಹೆತ್ತು ಸಾಕಿದ ಜನನಿ, ಜನ್ಮದಾತ ಮತ್ತೆ ನಕ್ಷತ್ರವಾಗಿ ಕಾಡಿದರೇಕೋ? ಆದರೆ ಸಿಗಲಿಲ್ಲ ಒಂದೂ ಗೆಳೆಯರೆಂಬ ನಕ್ಷತ್ರಗಳು. ಈ ನೋವಿದೆ. ಮುಗುಳ್ನಗು ಹೊರಗೆ, ಒಳಗೆ ಬೇಯುವ ಬೇಗೆ. ಕೈಚಾಚಿದರೆ ಕೈ ಹಿಸುಕಿ, ಕೈಯನ್ನೇ ನುಂಗುವ ಗೆಳೆಯರೆಂದು ಹೇಳಿಕೊಳ್ಳುವ ಗೆಳೆಯರು, ನಿಜ ಗೆಳೆಯರೇ? ಕಾಡಿದ್ದಿದೆ. ನಂಬುವುದು ಹೆಚ್ಚಲ್ಲ; ನಂಬಿಕೆಯೇ ಮೋಸವಾದಾಗ ಅಳುವುದೊಂದೇ ಉಳಿದಿರುವುದು. ಆಗ ಬೇಕಲ್ಲಾ ಕಣ್ಣೊರೆಸುವ ಮೃದು ಹಸ್ತಗಳು. ನೀಡಬಹುದು ಆಕ್ರಂದನದ ನೋವು ಅಳಿಸುವ, ಅಳುವ ಕಣ್ಣುಗಳ ನೀರು ಒರೆಸುವ ಮುದ್ದಿನ ನಕ್ಷತ್ರಗಳು.
ವಾಸ್ತವತೆಯ ಕಹಿಯಲ್ಲಿ, ಕನಸಿನ ಲೋಕವೂ ನನ್ನದಲ್ಲ; ನಾನಿರುವ ತಾಣವೂ ಶಾಶ್ವತವಲ್ಲ. ಹಾಗಿರುವಾಗ ಬೆಳಕು ಕಳೆದು ಮುಗಿಲ ನಡುವೆಯೂ, `ಅಳಬೇಡ, ಅಳಿಸುವರ್‍ಯಾರು ನಿನ್ನ?' ಅನ್ನುತ್ತಾ ನಗುವ ಸಾವಿರ ಕಣ್ಣಿನ ಆಕಾಶದ ಮುದ್ದು ನಕ್ಷತ್ರಗಳ ಸೆಳೆತ ಬತ್ತದ, ಕೊನೆಯಾಗದ ಆಯಸ್ಕಾಂತದ ಕಾಂತವು. ಹೀಗೆ ನೋಡುವವರಿಗೆ ನಾನೂ ದು:ಖಿಯಲ್ಲ, ಆದರೆ ಹೊರಗೆ ತಾರಸಿಯಲ್ಲಿ ಕುಳಿತಿರುವಾಗ ಮನಸ್ಸಿನ ದು:ಖಕ್ಕೆ ಸಾಂತ್ವನದ ಸೆರಗು ಹಾಸುವ ಗಾಳಿ, ಗಾಳಿಯ `ಹಾಯ್'; `ಹಾಯ್'‍ಗೆ ಹಾಯಿಯಾಗುವ ಚುಕ್ಕಿಗಳ ಮಿನುಗು ಅರ್ಥೈಸಿಕೊಳ್ಳುತ್ತವೆ ನನ್ನ ಮನಸ್ಸಿನ ಕಣ್ಣೀರನ್ನು. `ತುಟಿ ಬಿರಿದು ನಗು ತೋರು, ಆ ನಗುವಿನಲ್ಲೂ ನಾವಿದ್ದೇವಲ್ಲಾ? ಬೆಳಗಾದರೇನೂ ನಮ್ಮ ಬಿಂಬವೇ ನಿನ್ನ ತುಟಿಗಳಲ್ಲಿ' ಅನ್ನುವ ನಕ್ಷತ್ರಗಳ ಉತ್ತೇಜನವೇ ನನಗೆ ಸಾಕು.
ನೋವಾದಾಗಲೆಲ್ಲಾ ಕೇಳುತ್ತೇನೆ, `ನಕ್ಷತ್ರಗಳೇ ನನ್ನ ತುಟಿಗಳಲ್ಲಿ ನೀವಿರುವಿರಲ್ಲಾ?' ಕಣ್ಣು ಮಿಟುಕಿಸುತ್ತವೆ, ಮತ್ತೆ `ನಾಳೆ ಬರುತ್ತೇವೆ' ಅನ್ನುತ್ತವೆ. ಇದಕ್ಕಿಂತಲೂ ಹೆಚ್ಚಿನ ಗೆಳೆಯರು ಬೇಕೆ?

No comments: